ತಂತಿಹುಳು
	 ಕೋಲಿಯಾಪ್ಪರ ಗಣದ ಎಲ್ಯಾಟರಿಡೀ ಕುಟುಂಬಕ್ಕೆ ಸೇರಿದ ಜೀರುಂಡೆಗಳ ಡಿಂಬಕ್ಕಿರುವ ಸಾಮಾನ್ಯ ಹೆಸರು (ವಯರ್‍ವರ್ಮ್).  ವಯಸ್ಕ ಜೀವಿಗಳನ್ನು ಸ್ಕಿಪ್‍ಜಾಕ್ಸ್ ಅಥವಾ ಕ್ಲಿಕ್ ಬೀಟ್ಸ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ.  ಇವು ಕೀಟಗಳ ಗುಂಪಿನಲ್ಲೇ ಬಹು ಹಾನಿಕಾರಕ ಮತ್ತು ಬಹಳ ಬೇಗ ಹರಡುವ ಕೀಟಗಳು ಎನಿಸಿಕೊಂಡಿವೆ.  ಇವು ಭೂಮಿಯ ಒಳಗೇ ಹುದುಗಿದ್ದು, ಜೋಳ, ದವಸ, ಧಾನ್ಯಗಳು, ಹುಲ್ಲು, ಅಲೂಗಡ್ಡೆ, ಕೋಸು, ಮೂಲಂಗಿ, ಕ್ಯಾರೆಟ್, ಹುರುಳಿ, ಬಟಾಣಿ, ಮೊದಲಾದ ತರಕಾರಿಗಳು, ಹೂವಿನ ಗಿಡಗಳು ಮುಂತಾದವುಗಳ ಕಾಂಡವನ್ನು ತಿಂದು ಬದಕುತ್ತವೆ.  ಅಲ್ಲದೆ ಕಾಳುಗಳ ತಿರುಳನ್ನು ಪೂರ್ತಿ ತಿಂದು ಟೊಳ್ಳು ಮಾಡಿ ಕಾಳಿನ ಹೊರಕವಚವನ್ನು ಹಾಗೇ ಬಿಡುತ್ತವೆ.  ಇದರಿಂದ ಬೀಜಗಳು ಮೊಳೆಯುವುದಿಲ್ಲ.  ಒಂದು ವೇಳೆ ಮೊಳೆತರೆ ಸಸಿಗಳು ರೋಗಕ್ಕಿಡಾದಂತಿದ್ದು ಬೇಗ ಒಣಗಿ ಸತ್ತುಹೋಗುತ್ತವೆ.  ತಂತಿಹುಳುಗಳು ಗಟ್ಟಿಯಾಗಿ, ಕೆಂಪುಮಿಶ್ರಿತ ಕಂದು ಬಣ್ಣಕ್ಕಿದ್ದು ಹೆಸರೇ ತಿಳಿಸುವಂತೆ ತೆಳುವಾದ ತಂತಿಯ ಮಾದರಿಯಲ್ಲಿವೆ.  ಇವುಗಳ ಉದ್ದ 2.5-3.5 ಛಿm.  ಚಳಿಗಾಲದಲ್ಲಿ ಭೂಮಿ ಒಳಗೆ  ಹುದುಗಿದ್ದ ವಸಂತಋತು ಪ್ರಾರಂಭವಾದ ತಕ್ಷಣವೇ ಜೀರುಂಡೆಗಳಾಗಿ ಪರಿವರ್ತನೆಗೊಂಡು ಹಾರಿ ಹೋಗಿ ಬೆಳೆಗಳನ್ನು ಮುತ್ತುತ್ತವೆ.  ಕೆಲಕಾಲಾನಂತರ ಇವು ಮಣ್ಣನ್ನು ಕೊರೆದು ಅತಿಥೇಯ ಸಸ್ಯದ ಕಾಂಡದ ಸುತ್ತಲೂ 50 ರಿಂದ 150 ಮೊಟ್ಟೆಗಳನ್ನಿಡುತ್ತದೆ.  ಕೆಲವು ದಿವಸಗಳು ಇಲ್ಲವೇ ಕೆಲವು ವಾರಗಳ ತರುವಾಯ ಮೊಟ್ಟೆಗಳು ಒಡೆದು ಮರಿಗಳು (ತಂತಿಹುಳುಗಳು) ಹೊರಬರುವುದು.  ಇವು ಎರಡು ವರ್ಷಗಳಿಂದ ಅರು ವರ್ಷಗಳವರೆಗೆ ಭೂಮಿಯ ಒಳಗಡೆಯೇ ಇದ್ದು ಅತಿಥೇಯ ಸಸ್ಯಗಳ  ಕಾಂಡವನ್ನು ತಿಂದು ಜೀವಿಸುತ್ತವೆ.  ಬೇಸಿಗೆ  ಕಾಲದಲ್ಲಿ ಮಣ್ಣು ಒಣಗಿ ಬಿಸಿಯಾಗಿರುವುದರಿಂದ ಇವು ಭೂಮಿಯ ಒಳಗೇ ಇದ್ದುಬೀಡುತ್ತವೆ.  ಅದ್ದರಿಂದ ಈ ಕಾಲದಲ್ಲಿ ಇವು ಗೋಚರವಾಗುವುದಿಲ್ಲ.  ಅನಂತರ ಇವು ಕೋಶಾವಸ್ಥೆಯನ್ನು ಕಳೆದು ಕೆಲವು ವಾರಗಳ ತರುವಾಯ ವಯಸ್ಕ ಜೀರುಂಡೆಗಳಾಗಿ ಮಾರ್ಪಡುತ್ತವೆ.
                            (ಜಿ,ಎಸ್.ಅರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ